ಘಿಯಾಸ್ - ಉದ್ - ದೀನ್ ಮಹಮದ್ ಷಾ

ಆಳ್ವಿಕೆ : 1553-1538. ಬಂಗಾಳವನ್ನಾಳಿದ (1493-1538) ಹುಸೇನ್ ಷಾಹಿ ವಂಶದ ಕೊನೆಯ ದೊರೆ. 1533 ರಲ್ಲಿ ನಾಸಿರ್-ಉದ್-ದೀನ್ ನುಸ್ರತ್ ಖಾನ್ ತನ್ನ ಅರಮನೆಯ ನಪುಂಸಕರಿಂದ ಕೊಲೆಗೀಡಾದಾಗ ಅವನ ಮಗ ಘಿಯಾಸ್-ಉದ್-ದೀನ್ ಮಹಮೂದ್ ಷಾ ಸಿಂಹಾಸನವೇರಿದ.

ಆಗ ದೆಹಲಿಯಲ್ಲಿ ಅಧಿಕಾರಕ್ಕೇರಿದ್ದ ಷೇರ್ ಷಾನನ್ನು ತಡೆಯುವ ಉದ್ದೇಶದಿಂದ ಲೊಹಾನಿ ಆಪ್ಘನರು ಘಿಯಾಸ್-ಉದ್-ದೀನ್ ಮಹಮೂದ್ ಷಾನ ಮೈತ್ರಿ ಬೆಳೆಸಿದರು. ಆದರೆ ಅವರ ಉದ್ಧೇಶ ಸಫಲವಾಗಲಿಲ್ಲ. ಬಂಗಾಳದ ಮೇಲೆ ಷಾ ದಾಳಿ ಮಾಡಿದಾಗ ಘಿಯಾಸ್-ಉದ್-ದೀನ್ ಅವನನ್ನು ವಿರೋಧಿಸಲು ಯತ್ನಿಸದೆ ಒಪ್ಪಂದ ಮಾಡಿಕೊಂಡು ಸು. 13 ಲಕ್ಷ ಚಿನ್ನದ ನಾಣ್ಯಗಳನ್ನೂ ಹೆಚ್ಚು ಪ್ರದೇಶವನ್ನೂ ಅವನಿಗೆ ಒಪ್ಪಿಸಿದ. ಆದರೂ ಷೇರ್ ಷಾ ಬಿಡಲಿಲ್ಲ. ಬಂಗಾಳವನ್ನು ಆಕ್ರಮಿಸಿಕೊಂಡು ಘಿಯಾಸ್-ಉದ್-ದೀನನನ್ನು ಓಡಿಸಿದ.

ಘಿಯಾಸ್-ಉದ್-ದೀನ್ ಅಧ್ಯಕ್ಷತೆಯಿಂದ ಬಂಗಾಳದ ಸ್ವಾತಂತ್ರ್ಯದ ನಾಶಕ್ಕೆ ಕಾರಣನಾದನೆಂದು ಸಮಕಾಲೀನ ಇತಿಹಾಸಕಾರರು ಬರೆದಿದ್ದಾರೆ. ಈತ ವಿಷಯಾಸಕ್ತನಾಗಿದ್ದನೆಂದೂ ಇವನ ಜನಾನಾದಲ್ಲಿ ಹತ್ತು ಸಾವಿರ ಸ್ತ್ರೀಯರಿದ್ದರೆಂದೂ ಪೋರ್ಚುಗೀಸರ ಬರವಣಿಗೆಗಳಿಂದ ತಿಳಿದು ಬರುತ್ತದೆ.							(ವಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ